ರಂಗಾಚಾರ್ಲು
1831 - 83. ಹಿಂದಿನ ಮೈಸೂರು ಸಂಸ್ಥಾನದ ದಿವಾನರು. ಶಿಟ್ಟಿಪುಣ್ಯಂ ವೀರವಳ್ಳಿ ರಂಗಾಚಾರ್ಲು ಇವರ ಪೂರ್ಣ ಹೆಸರು. 1831 ರಲ್ಲಿ ತಮಿಳುನಾಡಿನ ಚೆಂಗಲ್‍ಪಟ್ಟು ಜಿಲ್ಲೆಯ ಶಿಟ್ಟಿಪುಣ್ಯಂನಲ್ಲಿ ಜನಿಸಿದರು. ಇವರ ತಂದೆ ರಾಘವಾಚಾರ್ಯ, ತಾಯಿ ಕನಕಮ್ಮ, ರಂಗಾಚಾರ್ಲು ಅವರು ಮದರಾಸಿನ ಪಚ್ಚಿಯಪ್ಪ ಪಾಠಶಾಲೆ ಮತ್ತು ಮದರಾಸು ಹೈಸ್ಕೂಲುಗಳಲ್ಲಿ ವ್ಯಾಸಂಗ ಮಾಡಿದರು. 1849ರಲ್ಲಿ ವಿಶ್ವವಿದ್ಯಾಲಯದ ಪ್ರೊಫಿಷಿಯೆನ್ಸಿ (ಪ್ರವೀಣ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮದರಾಸು ಕಲೆಕ್ಟರರ ಕಚೇರಿಯಲ್ಲಿ ಹದಿನಾಲ್ಕು ರೂಪಾಯಿ ವೇತನದ ಮೇಲೆ ಸಹಾಯಕ ಮುನ್ಷಿಯಾಗಿ ಸೇರಿದರು (1850). ಅನಂತರ ರಿಕಾರ್ಡ್ ಕೀಪರ್ (ದಫ್ತರ್ ರಕ್ಷಕ), ಡೆಪ್ಯುಟಿ ಅಕೌಂಟೆಂಟ್ (1851), ಹೆಡ್ ರೈಟರ್ ಮತ್ತು ಭಾಷಾಂತರಕಾರರಾಗಿ (1852) ಕೆಲಸ ನಿರ್ವಹಿಸಿದರು. 1855ರಲ್ಲಿ ಹೆಚ್ಚಿನ ವ್ಯಾಸಂಗಕ್ಕೆಂದು ಮದರಾಸಿಗೆ ತೆರಳಿ ಲಾ ಕಾಲೇಜಿನಲ್ಲಿ ಓದಿದರು. 1866ರಲ್ಲಿ ಸಿವಿಲ್ ಕೋರ್ಟ್ ಪ್ಲೀಡರ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಅದೇ ವರ್ಷ ಸೈದಾಪೇಟೆಯ ತಹಶೀಲ್ದಾರರಾಗಿ ನೇಮಕಗೊಂಡರು. 1857 ರಲ್ಲಿ ನೆಲ್ಲೂರು ನಾಯಬ್ ಶಿರಸ್ತೆದಾರ್ ಕೆಲಸ ನಿರ್ವಹಿಸಿ, 1859ರಲ್ಲಿ ರಾಜ ಮಹೇಂದ್ರಿಯ ಡೆಪ್ಯುಟಿ ಕಲೆಕ್ಟರ್ ಆದರು. ಅನಂತರ ಇನಾಂ ಕಮಿಷನ್ನಿನ ಅಧ್ಯಕ್ಷ ಟೇಲರ್ ಅವರ ಸಹಾಯಕರಾಗಿ ಕೆಲಸ ನಿರ್ವಹಿಸಿದರು. 1864ರಲ್ಲಿ ಭಾರತೀಯ ರೈಲುಗಳ ಸ್ಥಿತಿಯನ್ನು ಪರಿಶೀಲಿಸಲು ಟೇಲರ್ ಅವರು ನೇಮಕಗೊಂಡಾಗ ರಂಗಾಚಾರ್ಲು ಅವರನ್ನು ತಮ್ಮ ಸಹೋದ್ಯೋಗಿಯನ್ನಾಗಿ ನೇಮಿಸಿಕೊಂಡರು. ಅನಂತರ ರಂಗಾಚಾರ್ಲು 1864ರಲ್ಲಿ ಕಲ್ಲಿಕೋಟೆಯ ಖಜಾನೆಯ ಉಪಕಲೆಕ್ಟರ್ ಆದರು. ಮುಮ್ಮುಡಿ ಕೃಷ್ಣರಾಜ ಒಡೆಯರು ಕಾಲವಾದಾಗ (1868) ಅವರ ಚರ - ಸ್ಥಿರ ಸ್ವತ್ತುಗಳನ್ನು ಜೋಪಾನ ಮಾಡಿ, ಅವರ ಸಾಲಗಳನ್ನು ತೀರಿಸುವ ಏರ್ಪಾಡಿಗಾಗಿ ಮೇಜರ್ ಎಲಿಯಟ್ ನೇಮಕವಾದರು. ಆಗ ಬೌರಿಂಗ್ ಸಾಹೇಬರ ಶಿಫಾರಸ್ಸಿನಂತೆ ರಂಗಾಚಾರ್ಲು ಎಲಿಯಟ್ ಅವರ ಸಹಾಯಕ ಅಧಿಕಾರಿಯಾಗಿ ಮೈಸೂರಿಗೆ ಬಂದರು. ಇವರು ಅಧಿಕಾರ ವಹಿಸಿಕೊಂಡಾಗ ಅರಮನೆಯ ಆಡಳಿತದಲ್ಲಿ ನ್ಯೂನತೆಗಳಿದ್ದವು. ಬೊಕ್ಕಸ ಬರಿದಾಗಿತ್ತು. ಅರಮನೆಯ ವಸ್ತುಗಳು ದೋಚಿಹೋಗಿದ್ದವು. ರಂಗಾಚಾರ್ಲು ಕಟ್ಟುನಿಟ್ಟಾದ ನಿಯಮಗಳನ್ನು ತಂದು ಅರಮನೆಯ ದುಂದು ವೆಚ್ಚಗಳನ್ನೆಲ್ಲ ನಿಲ್ಲಿಸಿದರು. ಬಾಲಕರಾಗಿದ್ದ ಚಾಮರಾಜ ಒಡೆಯರ ಪಟ್ಟಾಭಿಷೇಕ ಕೂಡಲೇ ಅಗತ್ಯವೆಂದು ಬ್ರಿಟಿಷ್ ಸರ್ಕಾರಕ್ಕೆ ಶಿಫಾರಸು ಮಾಡಿದರು. ಅರಮನೆಯ ಕಾರ್ಯದರ್ಶಿಯಾಗಿದ್ದ ರಂಗಾಚಾರ್ಲು ಅವರಿಗೆ ಚಾಮರಾಜ ಒಡೆಯರ ಪೋಷಕರಿಗೆ ಸಹಾಯ ಮಾಡುವ ಜವಾಬ್ದಾರಿ ಬಿದ್ದಿತು. ಇವರು ಚಾಮರಾಜ ಒಡೆಯರ ಶಿಕ್ಷಣದ ಉಸ್ತುವಾರಿಯನ್ನೂ ವಹಿಸಿದರು.

	ಇದೇ ಕಾಲದಲ್ಲಿ ರಂಗಾಚಾರ್ಲು ಮೈಸೂರು ಸಂಸ್ಥಾನದಲ್ಲಿ 50 ವರ್ಷಗಳ ಬ್ರಿಟಿಷ್ ಆಡಳಿತ ಎಂಬ ವಿದ್ವತ್‍ಪೂರ್ಣವಾದ ತಮ್ಮ ಲೇಖನದಲ್ಲಿ ಸಂಸ್ಥಾನದ ಪ್ರಗತಿಯಾಗಿಲ್ಲ, ನಾನಾ ಇಲಾಖೆಗಳು ಅಭಿವೃದ್ಧಿಗೊಳ್ಳಬೇಕಾಗಿದೆ ಎಂದು ಹೇಳಿಕೆಯನ್ನಿತ್ತರು. ಲಂಚರುಷುವತ್ತುಗಳನ್ನು ಖಂಡಿಸುತ್ತಿದ್ದ ಇವರು ಅರಮನೆಯ ವೆಚ್ಚವನ್ನು ತಗ್ಗಿಸಿ ಎರಡೂವರೆ ಲಕ್ಷ ರೂಪಾಯಿಗಳನ್ನು ಉಳಿಸಿದರು. ಇಂಡಿಯ ಸರ್ಕಾರ ಇವರ ದಕ್ಷತೆಯನ್ನು ಮೆಚ್ಚಿ ಇವರಿಗೆ ಸಿ. ಐ. ಇ. ಬಿರುದು ನೀಡಿತು (1878).

	1881 ರಲ್ಲಿ ಪ್ರಾಪ್ತವಯಸ್ಸಿಗೆ ಬಂದಿದ್ದ ಚಾಮರಾಜ ಒಡೆಯರು ರಾಜ್ಯಭಾರವನ್ನು ತಾವೇ ವಹಿಸಿಕೊಂಡಾಗ ರಂಗಾಚಾರ್ಲು ದಿವಾನರಾಗಿ ನೇಮಕಗೊಂಡರು. ದಿವಾನರಾಗಿದ್ದಾಗ ಇವರು ಬೆಂಗಳೂರು - ತಿಪಟೂರು ರೈಲುಮಾರ್ಗದ ಕೆಲಸವನ್ನು ಪ್ರಾರಂಭಿಸಿದರು. ಮೈಸೂರಿನಲ್ಲಿ 1881 ಆಗಸ್ಟ್ 25 ರಂದು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿ ಆ ಸಭೆಯ ಪಿತಾಮಹ ಎಂಬ ಕೀರ್ತಿಗಳಿಸಿದರು. ರಾಜ್ಯದಲ್ಲಿ ಸ್ತ್ರೀ ವಿದ್ಯಾಭ್ಯಾಸಕ್ಕೆ ಉತ್ತೇಜನ ಕೊಟ್ಟರು. ರಾಜ್ಯಕ್ಕಾಗಿ ಹೆಚ್ಚಾಗಿ ದುಡಿಯುತ್ತಿದ್ದ ಇವರು 1882 ರಲ್ಲಿ ದೇಹಾಲಸ್ಯದಿಂದ ವಿಶ್ರಾಂತಿಗಾಗಿ ಮದರಾಸಿಗೆ ತೆರಳಿ ಅಲ್ಲಿ 1883 ಜನವರಿ 20 ರಂದು ನಿಧನರಾದರು.

	ದಿವಾನ್ ರಂಗಾಚಾರ್ಲು ಅವರು ಕಠಿಣವಾಗಿ ಕಂಡರೂ ಮೃದುಸ್ವಭಾವದವರು. ನ್ಯಾಯತತ್ಪರರೂ ಪರಮದೇಶಾಭಿಮಾನಿಯೂ ಆಗಿದ್ದ ಇವರು ಚತುರ ಆಡಳಿತಗಾರರು. ದೇಶದ ಆರ್ಥಿಕ, ಸಾಮಾಜಿಕ, ಹಾಗೂ ಸಾಂಸ್ಕøತಿಕ ಉನ್ನತಿಗೆ ಶ್ರಮಿಸಿದ್ಧ ಮೈಸೂರು ದಿವಾನರುಗಳಲ್ಲಿ ಇವರಿಗೆ ಅಗ್ರಸ್ಥಾನ ಸಲ್ಲುತ್ತದೆ.

	ಮೈಸೂರು ಸಂಸ್ಥಾನಕ್ಕೆ ಅಪಾರಸೇವೆ ಸಲ್ಲಿಸಿದ ಇವರ ಸ್ಮರಣೆಗಾಗಿ ಮೈಸೂರಿನಲ್ಲಿ ರಂಗಾಚಾರ್ಲು ಮೆಮೋರಿಯಲ್ ಹಾಲ್ (ಈಗಿನ ಪುರಭವನ) ಸ್ಥಾಪಿಸಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ